ಮೂತ್ರರೋಗಗಳು - 
1. ವಿಶಿಷ್ಟ ಕ್ರಿಮಿಶೂನ್ಯ ಉರಿಮೂತ್ರ. ಈಚೆಗೆ ವರ್ಗೀಕರಿಸಿ ವಿವರಿಸಲಾದ ರೋಗ. ತೀವ್ರ ಗೊನೋರಿಯದ ಲಕ್ಷಣಗಳೇ ಇದರ ಲಕ್ಷಣಗಳಾದರೂ ಗೊನೋಕಾಕಸ್ ಕೀವಿನಲ್ಲಿ ಇಲ್ಲವೇ ಮೂತ್ರದಲ್ಲಿ ಯಾವರೀತಿ ಹುಡುಕಿದರೂ ಕಾಣಿಸುವುದಿಲ್ಲ. ಆದ್ದರಿಂದ ಇದಕ್ಕೆ ಗೊನೋರಿಯ ಕ್ರಿಮಿಶೂನ್ಯ ಉರಿಮೂತ್ರ ಎನ್ನಬಹುದು. ಪೆನಿಸಿಲಿನ್ ಔಷಧಿ ಉಪಯೋಗಕ್ಕೆ ಬಂದಂದಿನಿಂದ ಈ ರೋಗದ ಅಸ್ತಿತ್ವವನ್ನು ಸ್ಥಾಪಿಸಲಾಗಿದೆ. ಪೆನಿಸಿಲಿನಿಂದ ಈ ರೋಗ ಗುಣವಾಗದು. ಸ್ಟಫಿಲೋಕಾಕಸ್, ಬಿ.ಕೋಲೈ ಸೂಕ್ಷ್ಮಜೀವಿಗಳು ಮತ್ತು ಟ್ರೈ ಕೊಮೋನ ವೆಜೈನಾಲೀಸ್ ಎಂಬ ಏಕಕಣಜೀವಿಗಳು (ಪ್ರೊಟೊಜೋóವ) ಇಂಥ ಕೀವುಯುಕ್ತ ಉರಿ ಮೂತ್ರಗಳನ್ನು ಉಂಟುಮಾಡುತ್ತವೆ. ದ್ರಾವಕ ಮತ್ತು ಕ್ಷಾರಗಳು ಮೂತ್ರನಾಳಗಳು ಉರಿಯೂತಕ್ಕೀಡುಮಾಡಿ ಉರಿಮೂತ್ರಕ್ಕೆ ಕಾರಣವಾಗಬಹುದು. ಮೂತ್ರನಾಳಕ್ಕೆ ಯಾವುದೇ ವಿಧವಾದ ಗಾಯವಾದಾಗ ಅಥವಾ ರಬ್ಬರ್ ಇಲ್ಲವೆ ಲೋಹದ ನಳಿಕೆ ಹಾಕಿ ಮೂತ್ರಕೋಶದಿಂದ ನೀರು ತೆಗೆದಾಗ ಉರಿಮೂತ್ರ ಬರುವುದು. ಶಸ್ತ್ರಕ್ರಿಯೆ ಮಾಡುವ ಮುಂಚೆ ಶುಭ್ರಮಾಡಲು ನಳಿಕೆದ್ವಾರದ ಮೂಲಕ ಕೆಲವು ದ್ರವಗಳನ್ನು ಹಾಕಿ ತೊಳೆಯುವುದುಂಟು. ಹೀಗೆ ಮಾಡುವಾಗ ಮೂತ್ರನಾಳದ ಅಂಟುಪೊರೆಗೆ ಗಾಯವಾದರೆ ಉರಿಮೂತ್ರ ಬರುತ್ತದೆ.

	ಸಂಶೋಧಕರು ಹೊಸತಾಗಿ ಈ ತನಕ ವಿವರಿಸದಿರುವ ಮಿಮೆ ಎಂಬ ಕ್ರಿಮಿಗಳನ್ನು ಉರಿಮೂತ್ರದಲ್ಲಿ ಗುರುತಿಸಲಾಗಿದೆ. ಕ್ರಿಮಿಗಳು ಗೊನೋಕಾಕಸಿನಂತಿದ್ದು ಗ್ರಾಮನಬಣ್ಣ ಕೊಡುವ ಕ್ರಮದಲ್ಲಿ ನೀಲಿಯಾಗಿ ಕಾಣುವುವು. ಮಿಮೆ ಎಂದರೆ ಅನುಕರಿಸುವ ಕ್ರಿಮಿ ಎಂದರ್ಥ. ಇನ್ನೂ ಕೆಲವರು ಉರಿಮೂತ್ರದಲ್ಲಿ ಪ್ಲೂರೊ ನ್ಯೂಮೋನಿಯ ಕ್ರಿಮಿಗಳನ್ನು ಅನುಕರಿಸುವ ಕ್ರಿಮಿಗಳನ್ನು ಕಂಡಿದ್ದಾರೆ. ಇವು ಸಾಧಾರಣವಾಗಿ, ಕುರಿ, ಆಡು, ನಾಯಿ ಮತ್ತು ಇಲಿಗಳಲ್ಲಿ ರೋಗ ಉಂಟು ಮಾಡುತ್ತದೆ. ಎಲ್ಲರಲ್ಲಿಯೂ ಯಾವಾಗಲೂ ರೋಗ ಉತ್ಪನ್ನ ಮಾಡಲಾರವು. ಕೃತ್ರಿಮವಾಗಿ ಬೆಳೆಸಲು ರಕ್ತದ್ರವ ಇಲ್ಲವೆ ಜಲೋದರದ್ರವ ಬೇಕು. ಕೆಲ ಕ್ರಿಮಿಗಳು (ಬಿ. ಕೋಲೈ) ಕೃತ್ರಿಮ ಅನಾನುಕೂಲ ಪರಿಸ್ಥಿತಿಯಲ್ಲಿ ಬದಲಾವಣೆ ಹೊಂದಿ ಪ್ಲೂರೊನ್ಯೂಮೋನಿಯ ಕ್ರಿಮಿಗಳನ್ನು ಹೋಲುವಂತಾಗುತ್ತವೆಂದು ಊಹಿಸಲಾಗಿದೆ. ಇವು ವೈರಸ್‍ಗಳೆಂಬುದು ನಿಶ್ಚಿತವಾಗಿಲ್ಲ.

	2. ರೀಟರನ ರೋಗ ಎಂಬ ಲಕ್ಷಣಕೂಟ (ಸಿಂಡ್ರೋಮ್) ಇಂಥ ಉರಿಮೂತ್ರದಿಂದಲೇ ಪ್ರಾರಂಭವಾಗುತ್ತದೆ. ಸ್ವಲ್ಪ ದಿವಸಗಳ ಬಳಿಕ ಅನೇಕ ಕೀಲುಗಳ ಉರಿಯೂತ ಮತ್ತು ಕಣ್ಣಿನ ಬಿಳಿಪೊರೆಯ ಉರಿಯೂತ ಬರುವುವು. ಉರಿಮೂತ್ರ ಕ್ಷಣಿಕ. ಕೀಲು ಉರಿಯೂತದಿಂದ ಕೆಲವು ಕೀಲುಗಳಲ್ಲಿ ನೋವು, ಕಾವು, ಕೆಂಪು, ಬಾವು ತದೇಕವಾಗಿರುವುವು. ಕಣ್ಣಿನ ಬಿಳಿ ಪೊರೆ ಕೆಂಪಾಗಿ ನೀರು ಸುರಿಸಿ ನೋವು ಬರಬಹುದು, ಕಣ್ಣು, ಕೀಲು ಮೂತ್ರನಾಳ ಈ ಕ್ರಿಯೇಂದ್ರಿಯಗಳ ಉರಿಯೂತದಿಂದುಂಟಾದ ಲಕ್ಷಣಕೂಟವೇ ಈ ರೋಗದ ವೈಶಿಷ್ಟ್ಯ. ಸಾಧಾರಣವಾಗಿ ಇದು ವಯಸ್ಕ ಗಂಡಸರಲ್ಲಿ ಕಾಣಬರುವುದು. ಕೆಲರೋಗಿಗಳಲ್ಲಿ ಉದುರುವ (ಸ್ಕೇರಿ), ತೊಗಟೆಯುಳ್ಳ (ಕ್ರಸ್ಟಿ) ಚರ್ಮದ ಗಾಯಗಳನ್ನು ದೇಹದ ಎರಡೂ ಕಡೆ ಅಂಗೈ ಅಂಗಾಲು, ಮೊಣಕಾಲು ಮತ್ತು ಉಪಸ್ಥೆಗಳಲ್ಲಿ ಕಾಣಬಹುದು. ವಿಶಿಷ್ಟ ಲಕ್ಷಣ ಮಾಯವಾಗಿ ಮರಳಬಹುದು. ಕೆಲರೋಗಿಗಳು ಆಮಶಂಕೆಯಿಂದ ನರಳುವುದುಂಟು.
(ಎನ್.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ